ಪ್ರೇತಬರಹ
	ಮೂಲ ಲೇಖಕರ ಹೆಸರನ್ನು ಮರೆಮಾಚಿ ಬೇರೆಯವರ ಅಥವಾ ಕಲ್ಪಿತ ವ್ಯಕ್ತಿಗಳ ಹೆಸರಿನಲ್ಲಿ ಪ್ರಕಟವಾಗುವ ಬರಹ (ಗೋಸ್ಟ್ ರೈಟಿಂಗ್). ಬೇರೊಂದು ಅರ್ಥದಲ್ಲಿ ಅಜ್ಞಾತ ಲೇಖಕನ ಬರಹ. ತಮಗೆ ಆಶ್ರಯ ನೀಡಿದ ರಾಜನ ಋಣ ಸಂದಾಯಿಸಲು ಅಥವಾ ತಮ್ಮ ಪ್ರಭುಭಕ್ತಿ ತೋರಿಸಲು ಹಿಂದಿನ ಆಸ್ಥಾನ ಕವಿಗಳು ತಾವು ಬರೆದ ಕೃತಿಯನ್ನು ಅರಸನಿಗೆ ಅರ್ಪಿಸಿ ಅವನ ಅಂಕಿತದಲ್ಲೇ ಗ್ರಂಥ ಪ್ರಕಟಿಸುತ್ತಿದ್ದರು. ಇದರಿಂದಾಗಿ ಕವಿರಾಜಮಾರ್ಗವನ್ನೊಳಗೊಂಡಂತೆ ಅನೇಕ ಕೃತಿಗಳ ನಿಜವಾದ ಕರ್ತೃಗಳಾರೆಂಬುದರ ಬಗ್ಗೆ ವಾದವಿವಾದಗಳು ನಡೆಯುತ್ತಿವೆ.

	ಗ್ರಂಥದ ಕರ್ತೃವಿನ ಹೆಸರು ಬಿಟ್ಟು ಬೇರೊಂದು ಹೆಸರಿನಲ್ಲಿ ಗ್ರಂಥ ಪ್ರಕಟವಾಗಿರುವುದು ಎಲ್ಲ ದೇಶಗಳಲ್ಲೂ ಉಂಟು. ರಾಜಕಾರಿಣಿಗಳಿಗೆ ಭಾಷಣ ಬರೆದು ಕೊಡುವವರು ಸಂಶೋಧನಾಲಯಗಳಲ್ಲಿ ಅದರ ಮುಖ್ಯಸ್ಥನ ಹೆಸರಿನಲ್ಲಿ ತಮ್ಮ ಬರಹಗಳನ್ನು ಬೆಳಕು ಕಾಣಿಸುವರು, ಮತ್ತೊಬ್ಬ ಹೆಸರಾದ ಲೇಖಕನಿಗೆ ಬರೆದು ಕೊಡುವವರೂ ಇದ್ದಾರೆ. ಅವರನ್ನು ಗುಪ್ತಬರಹಗಾರರೆಂದೂ ಕರೆಯುತ್ತಾರೆ. ಪ್ರೇತಬರಹಕ್ಕೆ ಸ್ನೇಹ, ದಾಕ್ಷಿಣ್ಯ ಮತ್ತು ಹಣ ಮುಂತಾದವು ಕಾರಣವಾಗಿರುತ್ತವೆ. 
(ಬಿ.ವಿ.ವಿವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ